savithaprabhakar@rediffmail.com
+ 91 9845931410

ಸವಿತಾ ಪ್ರಭಾಕರ್ ರವರ ಪರಿಚಯ

ತಮ್ಮ ಬರಹಗಳಿಂದ ಓದುಗರಿಗೆ ಪರಿಚಿತರಾಗಿರುವ ಸವಿತಾಪ್ರಭಾಕರ್ ಬಿ.ಎಸ್.ಸಿ. ಪದವೀಧರೆ. ಕೆ.ವಿ.ಶ್ರೀಕಂಠಯ್ಯ ಹಾಗೂ ಲಲಿತಮ್ಮ ಶ್ರೀಕಂಠಯ್ಯ ದಂಪತಿಗಳ ಪುತ್ರಿಯಾದ ಸವಿತಾ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಸಂಗೀತ, ಭಗವದ್ಗೀತೆ ಕಲಿಸುವುದಲ್ಲದೇ ಸಂಸ್ಕೃತ ಭಾಷೆಯ ಪರಿಚಯ ಮಾಡಿಸುತ್ತಿದ್ದಾರೆ.

ತಮ್ಮ ಆತ್ಮೀಯ ಸ್ನೇಹಿತೆಯಾದ ಸಿ.ಎನ್.ಮುಕ್ತಾ ಮತ್ತು ಬಿ.ಆರ್.ನಾಗರತ್ನ ಅವರುಗಳೊಡನೆ ಸೇರಿ ಕಥಾ ಮತ್ತು ಕವನ ಸಂಕಲನ ಕಾರ್ಯವನ್ನು 'ಸ್ನೇಹ ಬಳಗ' ಎಂಬ ಹೆಸರಿನಡಿಯಲ್ಲಿ ನಡೆಸುತ್ತಿದ್ದಾರೆ.

ಪತಿ ವೈ.ಎಸ್. ಪ್ರಭಾಕರ್ ರವರು ನಿವೃತ್ತ ಇಂಜಿನಿಯರ್. ಇವರು ಪತ್ನಿಯ ಸಾಧನೆ ಮತ್ತು ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಾ ಅವರ ಬೆನ್ನೆಲುಬಾಗಿ ನಿಂತಿದ್ದಾರೆ. ಇವರ ಹಿರಿಯ ಮಗ ಪಿ.ಸುಹಾಸ್ , ಪತ್ನಿ ಚೇತನಾ ಮತ್ತು ಪುತ್ರ ಸೌರಭ್ ರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕಿರಿಯ ಮಗ ಪಿ.ಸುಘೋಷ್ , ಪತ್ನಿ ಅಂಜಲಿ ಮತ್ತು ಪುತ್ರ ಸುವೀರ್ ರೊಂದಿಗೆ ಚನ್ನೈನಲ್ಲಿ ವಾಸವಾಗಿದ್ದಾರೆ.

ಸಾಹಿತ್ಯ ಮತ್ತು ಸಂಗೀತದ ಅಭಿರುಚಿ ಹೊಂದಿದ್ದ ಕುಟುಂಬದಿಂದ ಬಂದ ಸವಿತಾಪ್ರಭಾಕರ್ ಬಾಲ್ಯದಿಂದಲೇ ಸಾಹಿತ್ಯಾಸಕ್ತಿ ಉಳ್ಳವರು. ತಂದೆ ಸಮಾಜಸೇವೆಯೊಂದಿಗೆ ಬರಹ ಮತ್ತು ಹಿಂದೀಭಾಷೆಯ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಿತಾರ್ ನುಡಿಸಲು ಕಲಿತಿದ್ದ ತಾಯಿ ಲಲಿತಮ್ಮನವರು ಸಾಹಿತ್ಯ ಮತ್ತು ಸಂಗೀತಾಭಿಮಾನಿ.

ಸಾಹಿತ್ಯ

ಕಾಲೇಜು ದಿನಗಳಲ್ಲೇ ಒಂದಿಷ್ಟು ಬರೆಯುತ್ತಿದ್ದ ಸವಿತಾಪ್ರಭಾಕರ್ ರವರ ಮೊದಲ ಕಥೆ 'ಪರಾಶ್ರಯ'. ಯಾರ ಕಣ್ಣಿಗೂ ಬೀಳದೇ ಪುಸ್ತಕದ ಹಾಳೆಗಳಲ್ಲಿ ಮುಚ್ಚಿಹೋಗಿದ್ದ ಈ ಕಥೆ ಇವರ ವಿವಾಹವಾದ ಮೇಲೆ ಕನ್ನಡ ಪತ್ರಿಕೆಯೊಂದರಲ್ಲಿ 1985ರಲ್ಲಿ ಪ್ರಕಟವಾಯಿತು. ಈ ಕಥೆ ಪ್ರಕಟವಾಗುವುದಕ್ಕೆ ಕಾರಣ ಕನ್ನಡದ ಜನಪ್ರಿಯ ಕಥೆಗಾರರು ಹಾಗೂ ನಾಟಕಕಾರರಾದ ಶ್ರೀ ಹೂಲಿಶೇಖರ್ ರವರ ಪ್ರೋತ್ಸಾಹ.

ಇದುವರೆಗೆ ಇವರ ಹಲವು ಪುಸ್ತಕಗಳು ಪ್ರಕಟವಾಗಿವೆ. ಕಥಾಸಂಕಲನ, ಕಾದಂಬರಿ ಹಾಸ್ಯಬರಹಗಳ ಸಂಕಲನ ಇತ್ಯಾದಿ...

ಅನೇಕ ಬರಹಗಳು ತರಂಗ, ತುಷಾರ, ವನಿತಾ, ಮಂಗಳ, ವಿಜಯಕರ್ನಾಟಕ, ಮಂಜುವಾಣಿ, ವನಿತಾವಾಣಿ... ಇತ್ಯಾದಿ ಪತ್ರಿಕೆಗಳಲ್ಲಿ ಬೆಳಕುಕಂಡಿವೆ.

ಹಲವು ಲೇಖನಗಳನ್ನು ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದಿಸಿ 'ಪುಸ್ತಕ ಪ್ರಪಂಚ' ಮತ್ತು 'ಪ್ರಜಾನುಡಿ' ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಉತ್ಥಾನ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಇವರ ಸಣ್ಣಕಥೆ 'ಗುರುದಕ್ಷಿಣೆ' ಸಂಸ್ಕೃತಕ್ಕೆ ಅನುವಾದಗೊಂಡಿದೆ. ಇದನ್ನು ಶಿವಮೊಗ್ಗದ ಶ್ರೀ ಸಿ.ಆರ್.ಆನಂದ್ ಅನುವಾದಿಸಿದ್ದಾರೆ. ಇದು 'ಸಂಭಾಷಣ ಸಂದೇಶ' ಪತ್ರಿಕೆಯಲ್ಲಿ ಬೆಳಕುಕಂಡಿದೆ. 2002ರಲ್ಲಿ ವಾರ್ತಾಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹೊರತಂದಿರುವ 'ಜಂಬೋ ಪಯಣ' ಸ್ಮರಣ ಸಂಚಿಕೆ. ಮೈಸೂರು ದಸರಾ ಮಹೋತ್ಸವ ಪುಸ್ತಕದಲ್ಲಿ 'ದಸರಾ ಗೊಂಬೆ ಹಬ್ಬ' ಲೇಖನ ಪ್ರಕಟವಾಗಿದೆ.

ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಾಪುರ ಅವರು ಪ್ರಕಟಿಸಿರುವ 'ಮಹಿಳಾ ಲಲಿತ ಪ್ರಬಂಧಗಳು' ಸಂಕಲನದಲ್ಲಿ 'ಮಾತು' ಎಂಬ ಲಲಿತ ಪ್ರಬಂಧ ಸೇರ್ಪಡೆಯಾಗಿದೆ. ಇದಲ್ಲದೇ ಹಲವು ಸಂಕಲನಗಳಲ್ಲಿ ಕಥೆ, ಲೇಖನ, ಚುಟುಕ ಸೇರ್ಪಡೆಯಾಗಿದೆ.

ಧರ್ಮಜ್ಯೋತಿ ಸಮಾಜ ಸೇವಾ ಸಂಸ್ಧೆ ವಾಮಂಜೂರು, ಮಂಗಳೂರು ಇವರು ಪ್ರಕಟಿಸುತ್ತಿರುವ ತ್ರೈಮಾಸಿಕ ಪತ್ರಿಕೆ 'ಪ್ರತಿಭಾ' ದಲ್ಲಿ ಇವರು ಮಕ್ಕಳ ಬಗ್ಗೆ ಬರೆದಿರುವ ಲೇಖನಗಳು ಪ್ರಕಟವಾಗುತ್ತಿದೆ.

ಕೆಲವು ವರ್ಷಗಳಿಂದ ಖ್ಯಾತ ಲೇಖಕಿ ಸಿ.ಎನ್.ಮುಕ್ತಾ ಮತ್ತು ಬಿ.ಆರ್.ನಾಗರತ್ನ ಅವರೊಡನೆ ಸೇರಿ ಹಲವು ಕಥಾಸಂಕಲನ ಮತ್ತು ಕವನಸಂಕಲನವನ್ನು ಹೊರತಂದಿದ್ದಾರೆ.

ಮಡಿಕೇರಿ ಮತ್ತು ಮೈಸೂರು ಆಕಾಶವಾಣಿಯಲ್ಲಿ ಇವರ ಕಥೆ, ರೂಪಕ ಪ್ರಹಸನಗಳು ಪ್ರಸಾರವಾಗಿ ಜನ ಮೆಚ್ಚುಗೆ ಪಡೆದುಕೊಂಡಿದೆ.

2012 ರಲ್ಲಿ ಅತ್ತಿಮಬ್ಬೆ ಪ್ರತಿಷ್ಠಾನದ ಅತ್ತಿಮಬ್ಬೆ ಪ್ರಶಸ್ತಿ ಇವರಿಗೆ ಸಂದಿದೆ. ಕಥೆ ಮತ್ತು ಚುಟುಕಗಳಿಗೆ ಹಲವು ಬಹುಮಾನಗಳು ದೊರಕಿವೆ.