savithaprabhakar@rediffmail.com
+ 91 9845931410

25 ವರ್ಷಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಅಂಬಿಕಾನಗರದಲ್ಲಿ ಮನೆಯಲ್ಲಿಯೇ ಸಣ್ಣದಾಗಿ ಈ ಬಾಲಸಂಸ್ಕಾರ ಕೇಂದ್ರ ಪ್ರಾರಂಭವಾಯಿತು. ಮಕ್ಕಳಿಗೆ ಭಗವದ್ಗೀತೆಯನ್ನು ಕಲಿಸಿ ಸ್ಪರ್ಧೆಯನ್ನು ನಡೆಸುವುದು ಈ ಕೇಂದ್ರದ ಮುಖ್ಯ ಉದ್ದೇಶವಾಗಿತ್ತು. ಸವಿತಾಪ್ರಭಾಕರ್ ರವರ ತಂದೆಯವರಾದ ದಿ. ಕೆ.ವಿ.ಶ್ರೀಕಂಠಯ್ಯನವರ ಜನ್ಮದಿನದಂದು (ಜನವರಿ 26) ಸ್ಪರ್ಧೆಯನ್ನು ನಡೆಸಿ 'ಕೆ.ವಿ.ಎಸ್.ಸ್ಮಾರಕ' ಬಹುಮಾನವನ್ನು ವಿತರಿಸಲಾಗುತ್ತಿತ್ತು. ಅನಂತರದ ದಿನಗಳಲ್ಲಿ ಹಲವಾರು ಸಹೃದಯಿಗಳು ಈ ಬಹುಮಾನಕ್ಕಾಗಿ ದೇಣಿಗೆಯನ್ನು ನೀಡುತ್ತಿದ್ದರು. ನಂತರ ಈ ಪುಟ್ಟಕೇಂದ್ರ ಹಲವು ಸಂಸ್ಥೆಗಳ ಸಹಯೋಗದಿಂದ ದೊಡ್ಡದಾಗಿ ಬೆಳೆಯಿತು.

ಕೆಲವು ವರ್ಷಗಳ ಮೇಲೆ ಸವಿತಾಪ್ರಭಾಕರ್ ರವರ ಕುಟುಂಬ ರಾಯಚೂರಿನ ಶಕ್ತಿನಗರಕ್ಕೆ ವರ್ಗಾವಣೆಗೊಂಡಿತು. ಅಲ್ಲಿಯೂ ಹಲವು ಸ್ನೇಹಿತೆಯರ ಸಹಕಾರದಿಂದ ಮಕ್ಕಳಿಗೆ ಭಗವದ್ಗೀತೆಯನ್ನು ಕಲಿಸುತ್ತಿದ್ದರು. ಮತ್ತೆ ಕೆಲವು ದಿನಗಳ ಮೇಲೆ ಈ ಕುಟುಂಬ ಕೊಡಗಿನ ಕುಶಾಲನಗರಕ್ಕೆ ಬರಬೇಕಾಯ್ತು. ಅಲ್ಲಿಯೂ ಮಕ್ಕಳಿಗೆ ಭಗವದ್ಗೀತೆ ಮತ್ತು ಸಂಸ್ಕೃತ ಶ್ಲೋಕವನ್ನು ಕಲಿಸುತ್ತಿದ್ದ ಸವಿತಾರವರು ಕೆಲದಿನಗಳಾದ ಮೇಲೆ ಲಘುಸಂಗೀತದ ತರಗತಿಯನ್ನು ಪ್ರಾರಂಭಿಸಿದರು ನಂತರದ ದಿನಗಳಲ್ಲಿ ಈ ಕುಟುಂಬ ಮೈಸೂರಿಗೆ ವರ್ಗಾವಣೆಯಾದ ಮೇಲೆ ಈ ಕೇಂದ್ರ 'ಜಯವರ್ಧನ ಬಾಲಸಂಸ್ಕಾರ ಕೇಂದ್ರ' ಎಂಬ ಹೆಸರು ಪಡೆದುಕೊಂಡು ಇನ್ನಷ್ಟು ಚಟುವಟಿಕೆಗಳನ್ನು ಅಳವಡಿಸಿಕೊಂಡಿತು.

ಈಗ ಜಯವರ್ಧನ ಬಾಲಸಂಸ್ಕಾರ ಕೇಂದ್ರವು ಮೈಸೂರಿನ ಬೋಗಾದಿ ಮುಖ್ಯರಸ್ತೆಯಲ್ಲಿರುವ ಸವಿತಾಪ್ರಭಾಕರ್ ರವರ ಸ್ವಗೃಹದಲ್ಲಿ ನಡೆಯುತ್ತಿದೆ. ವಾರದಲ್ಲಿ ಮೂರುದಿವಸ ಇಲ್ಲಿನ ತರಗತಿ ತೆರೆದಿದ್ದು ಸಂಜೆ 4 ರಿಂದ 6 ರವರೆಗೆ ಲಘುಸಂಗೀತ, ಭಗವದ್ಗೀತೆ, ಸಂಸ್ಕೃತ ಶ್ಲೋಕಗಳನ್ನು ಕಲಿಸಲಾಗುತ್ತದೆ. ಶ್ರೀಕೃಷ್ಣ ಜಯಂತಿ, ಗೀತಾ ಜಯಂತಿ ಆಚರಿಸಲಾಗುತ್ತದೆ. ತಿಂಗಳ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೆನಪಿನ ಸ್ಪರ್ಧೆ, ಒಂದು ನಿಮಿಷದ ಭಾಷಣ, ಕಥಾಸಮಯ, ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಗೀತಾ ಜಯಂತಿಯಂದು ಬಾಲಸಂಸ್ಕಾರ ಕೇಂದ್ರದಲ್ಲಿ ಕಲಿಸಿಕೊಟ್ಟ ಭಗವದ್ಗೀತೆಯ ಶ್ಲೋಕಗಳನ್ನು ಹೇಳಿಸಿ ಕಡೆಗೆ ಎಲ್ಲಾ ಮಕ್ಕಳಿಗೂ ಪುಸ್ತಕ ಬಹುಮಾನ ನೀಡಲಾಗುತ್ತದೆ.

'ಜಯವರ್ಧನ ಬೇಸಿಗೆ ಶಿಬಿರ' ಈ ಕೇಂದ್ರದ ಮತ್ತೊಂದು ಆಕರ್ಷಣೆ. ಬೇಸಿಗೆ ಕಾಲದಲ್ಲಿ ನಡೆಯುವ ಈ ಶಿಬಿರದಲ್ಲಿ ಪ್ರಾರ್ಥನೆ, ವ್ಯಾಯಾಮ, ಸೂರ್ಯನಮಸ್ಕಾರ, ದೇಶಭಕ್ತಿಗೀತೆ, ಸಂಸ್ಕೃತ ಭಾಷಾ ಪರಿಚಯ, ರಾಮಾಯಣ, ಮಹಾಭಾರತ ... ಮುಂತಾದ ಗ್ರಂಥಗಳ ಪರಿಚಯ, ಒಳಾಂಗಣ ಆಟ, ಹೊರಾಂಗಣ ಆಟ, ನೀತಿಕಥೆಗಳು, ಕರಕುಶಲ ಕೆಲಸ ಇತ್ಯಾದಿಗಳನ್ನು ಕಲಿಸಲಾಗುತ್ತದೆ. ತಜ್ಞರನ್ನು ಕರೆಸಿ ಹಲವು ವಿಷಯಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ.

ಶಿಬಿರದಲ್ಲಿ ಜನಪದ ದಿನದಂದು ಜನಪದ ಹಾಡು, ಜನಪದ ಕಥೆ, ಜನಪದ ಆಟಗಳನ್ನು ಹೇಳಿಕೊಟ್ಟು ಗ್ರಾಮೋಪಯೋಗಿ ವಸ್ತುಗಳನ್ನು ಪರಿಚಯಿಸಲಾಗುತ್ತದೆ. ಈ ಕಾರ್ಯಕ್ರಮ ಅಪಾರ ಜನಮನ್ನಣೆ ಪಡೆದುಕೊಂಡಿದೆ. 'ಪ್ರತಿಭಾ ದಿನ'ದಂದು ಮಕ್ಕಳು ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುತ್ತಾರೆ. ಅಂದಿನ ಕಾರ್ಯಕ್ರಮ ಸಿಹಿತಿನಿಸುಗಳ ವಿನಿಯೋಗದೊಂದಿಗೆ ಮುಕ್ತಾಯವಾಗುತ್ತದೆ.